ಹೇಡ್ರಿಯನ್
76-138. ಪ್ರಸಿದ್ಧ ರೋಮನ್ ಚಕ್ರವರ್ತಿ (117-) ಇವನ ಪೂರ್ಣ ಹೆಸರು ಪಬ್ಲಿಯಸ್ ಎಲಿಯಸ್ ಹೇಡ್ರಿಯನಸ್. ಇವನು 76ರಲ್ಲಿ ಸ್ಪೇನಿನ ಇಟಾಲಿಕಾ ಎಂಬಲ್ಲಿ ಜನಿಸಿದ. ಬಾಲ್ಯದಲ್ಲೆ ತನ್ನ ತಂದೆಯನ್ನು ಕಳೆದುಕೊಂಡ ಇವನು ತನ್ನ ಸಂಬಂಧಿ ಟ್ರೇಜನ್ ಚಕ್ರವರ್ತಿಯ ಪೋಷಣೆಯಲ್ಲಿ ಬೆಳೆದ. ಇವನು ಟ್ರೇಜನ್‍ನ ಆಡಳಿತದಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ (ಅನುಭವ ಪಡೆದು) ದಕ್ಷ ಆಡಳಿತಗಾರನಾದ. ಟ್ರೇಜನ್‍ನ ಮರಣಾನಂತರ ಇವನು ರೋಮ್ ಸಾಮ್ರಾಟನಾದ (117). ಅನೇಕ ಯುದ್ಧಗಳ ಮೂಲಕ ಸಾಮ್ರಾಜ್ಯ ವಿಸ್ತರಿಸಿ, ಯೂಫ್ರೆಟೀಸ್ ನದಿಯನ್ನು ತನ್ನ ಸಾಮ್ರಾಜ್ಯದ ಪೂರ್ವದ ಗಡಿಯಾಗಿ ಮಾಡಿಕೊಂಡ. ಮೆಸೊಪೊಟೇಮಿಯ, ಲಿಸ್ಟಿರಿಯ ಪ್ರಾಂತ್ಯಗಳನ್ನು ಪಾರ್ಥಿಯನ್ನರಿಗೆ ಬಿಟ್ಟುಕೊಟ್ಟ, ಇವನ ಕಾಲದಲ್ಲಿ ಯಹೂದಿಗಳೊಂದಿಗೆ ಮಾಡಿದ ಯುದ್ಧವೇ ಪ್ರಮುಖವಾದುದ್ದು. ಅನಂತರ ಇವನು ಟ್ರೇಜನ್‍ನ ನೀತಿಯನ್ನು ಬದಲಿಸಿದ, ಯುದ್ಧಗಳನ್ನು ತಡೆಗಟ್ಟಿ ಸಾಮ್ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಿ ಪ್ರಗತಿಪಥದತ್ತ ಕೊಂಡೊಯ್ದ. ಇವನು ಈಜಿಪ್ಟ್‍ನಲ್ಲಿ ಆಂಟಿನೋಪಲ್ಸ್ ಹಾಗೂ ಟ್ರೇಸ್‍ನಲ್ಲಿ ಹೇಡ್ರಿನೋಪಲ್ ಎಂಬೆರಡು ಹೊಸನಗರಗಳನ್ನು ನಿರ್ಮಿಸಿದ. ಸಾಮ್ರಾಜ್ಯದಲ್ಲಿ ಭವ್ಯಕಟ್ಟಡಗಳು, ಸೌಧಗಳು, ದೇವಾಲಯಗಳು ಕಲ್ಲಿನ ಗೋಡೆಗಳು, ಗ್ರಂಥಾಲಯಗಳು, ವಿಶಾಲ ರಸ್ತೆಗಳನ್ನು ನಿರ್ಮಿಸಿದ. ಆಡಳಿತದಲ್ಲಿ ಸುಧಾರಣೆ ತಂದ. ಇವನ ಕಾಲದಲ್ಲಿ ವ್ಯಾಪಾರ ಪ್ರಗತಿಗೊಂಡಿತಲ್ಲದೆ, ಅಂಚೆ ಇಲಾಖೆಯನ್ನೂ ಸುಧಾರಿಸಿದ. ಎಲ್ಲಕ್ಕಿಂತ ಮಿಗಿಲಾಗಿ ಇವನು ರೋಮ್‍ನಗರದಲ್ಲಿ ಏಕರೀತಿಯ ಕಾನೂನುಗಳನ್ನು ಜಾರಿಗೊಳಿಸಿ ಎಲ್ಲರಿಗೂ ನಿಷ್ಪಕ್ಷಪಾತನ್ಯಾಯ ದೊರೆಯುವಂತೆ ವ್ಯಸ್ಥೆಗೊಳಿಸಿದ. ಇವನು ತಂದ ನ್ಯಾಯಾಂಗ ವ್ಯವಸ್ಥೆ ಇಂದಿಗೂ ಯುರೋಪಿಯನ್ನರಿಗೆ ಮಾದರಿಯಾಗಿದೆ. ಸೈನ್ಯದಲ್ಲಿ ಶಿಸ್ತನ್ನು ಜಾರಿಗೊಳಿಸಿದ. ಇವನು ಸ್ವತಃ ಕವಿ ಹಾಗೂ ವಾಸ್ತುಶಿಲ್ಪಿಯಾಗಿದ್ದು, ಗ್ರೀಕ್ ಸಂಸ್ಕøತಿಯನ್ನು ತಿಳಿದವನಾಗಿದ್ದ, ತನ್ನ ಸಾಮ್ರಾಜ್ಯದಲ್ಲಿ ಅನೇಕ ಕವಿಗಳಿಗೆ, ಶಿಲ್ಪಿಗಳಿಗೆ ಆಶ್ರಯ ನೀಡಿದ್ದ. ಇವನ ಕಾಲವನ್ನು ರೋಮ್ ಇತಿಹಾಸದಲ್ಲಿ ಸುವರ್ಣಯುಗ ಎಂದು ಗುರುತಿಸಲಾಗಿದೆ. 		   
      (ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ